ವಿಕೃತ ಮಾನಸ ವ್ಯಕ್ತಿತ್ವ - 
	ಸಮಾಜ ವಿರೋಧಿವರ್ತನೆ(ಆಂಟಿ ಸೋಶಿಯಲ್ ಬಿಹೇವಿಯರ್) ಎಂದು ಕರೆಯಲಾಗುವ ಮಾನಸಿಕ ಲಘು ಜಾಡ್ಯಗಳಿಂದ ನರಳುವವರು, ಮನೋವಿಕಲರು (ಮೆಂಟಲಿ ಡಿಸಾರ್ಡರ್ಡ್) ಅಸ್ಥಿರತೆ ಮತ್ತು ಕೆಟ್ಟ ಚಾಳಿಗಳು ಪ್ರಮುಖ ಲಕ್ಷಣಗಳುಳ್ಳ ವ್ಯಕ್ತಿಗಳು ಪಡೆದ ವ್ಯಕ್ತಿತ್ವ (ಸೈಕೋಪಥಿಕ್ ಪರ್ಸೊನಾಲಿಟಿ). ಈ ವಿಭಾಗದಲ್ಲಿ ನೀತಿಭ್ರಷ್ಟ ವ್ಯಾಪಾರಿಗಳು, ಕಕ್ಷಿಗಾರರನ್ನು ಶೋಷಣೆ ಮಾಡುವ ವಕೀಲರು, ಕೃತಕ ವೈದ್ಯರು, ಹಿಂಸಕ ಧರ್ಮೋಪದೇಶಕರು, ಕುಟಿಲ ರಾಜಕಾರಣಿಗಳು ಮೊದಲ್ಗೊಂಡು ಮಹಾವಂಚಕರು, ಅಕ್ರಮ ಸಂಭೋಗಿಗಳು, ವೇಶ್ಯೆಯರು ಮೊದಲಾದವರು ಸೇರಿದಂತೆ ಒಂದು ದೊಡ್ಡ ಗುಂಪೇ ಸಮಾವೇಶವಾಗುತ್ತದೆ. ಇವರಲ್ಲಿ ಚಿಕಿತ್ಸೆಗಾಗಿ ಮನೋವೈದ್ಯಶಾಲೆಗಳನ್ನು ಸೇರುವವರ ಸಂಖ್ಯೆ ಬಹಳ ಕಡಿಮೆ. ಇಂಥ ಸಂದರ್ಭ ಸೇ. ನೂರರಲ್ಲಿ ಒಂದು ಭಾಗ ಮಾತ್ರ. ಈ ವಿಕೃತ ಮಾನಸ ವ್ಯಕ್ತಿಗಳಲ್ಲಿ ಬಹು ಸಂಖ್ಯಾತರು ಸಮಾಜದಲ್ಲಿಯೇ ಇದ್ದುಕೊಂಡು, ಅದರೊಡನೆ ನಿರಂತರ ಘರ್ಷಣೆಯಲ್ಲಿ ತೊಡಗಿ, ಹೇಗೋ ತಮ್ಮ ಜೀವನವನ್ನು ಸಾಗಿಸುವಷ್ಟು ನಿಪುಣರಾಗಿರುತ್ತಾರೆ. ಈ ರೋಗದಿಂದ ನರಳುತ್ತಿರುವವರಲ್ಲಿ ಸಾಮಾನ್ಯವಾಗಿ ಹೆಂಗಸರಿಗಿಂತ ಗಂಡಸರ ಸಂಖ್ಯೆ ಅಧಿಕವಾಗಿರುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

	ರೋಗ ನಿರೂಪಣೆ: ವಿಕೃತ ಮಾನಸ ವ್ಯಕ್ತಿಗಳು ಸಾಮಾನ್ಯವಾಗಿ ಸಾಕಷ್ಟು ಬುದ್ಧಿವಂತರೆನಿಸಿ ಕೊಂಡಿರುತ್ತಾರಲ್ಲದೆ ಮಾನಸಿಕ ಲಘು ಜಾಡ್ಯಗಳಿಂದ ನರಳುವವರಾಗಿರುತ್ತಾರೆ. ಒಳತೋಟಿ ಮತ್ತು ಆತಂಕಗಳನ್ನಾಗಲೀ ಅಥವಾ ಮನೋವಿಕ್ಷಿಪ್ತರ ವಿಭ್ರಾಂತಿ, ವಿಭ್ರಮೆ ಮತ್ತು ಗಲಿಬಿಲಿಯನ್ನಾಗಲೀ ಅವರು ಪ್ರಕಟಿಸುವುದಿಲ್ಲ. ಅವರಲ್ಲಿ ಅನೇಕರು ಆಕರ್ಷಕ ರೂಪವಂತರೆನಿಸಿಕೊಂಡಿದ್ದರೂ ನೈತಿಕ ಮತ್ತು ಸಾಮಾಜಿಕ ಮನಸ್ಸುಗಳಿಗೆ ಹೊಂದಿಕೊಳ್ಳಲು ಅಸಮರ್ಥರಾಗಿದ್ದು ಸ್ವೇಚ್ಛಾಪ್ರವೃತ್ತಿಯುಳ್ಳವರಾಗಿರುತ್ತಾರೆ. ಅವರಲ್ಲಿ ಉದ್ವೇಗ, ಅಸ್ಥಿರತೆ, ಸ್ವಾರ್ಥಪರತೆ ಮತ್ತು ತೀವ್ರ ಭಾವೋದ್ರೇಕಗಳು ಮನೆಮಾಡಿ ಕೊಂಡಿರುತ್ತವೆ. ಮೇಲಾಗಿ ಅವರ ನಿರ್ಧಾರಗಳು ದೋಷಪೂರ್ಣ ವಾಗಿದ್ದರು ಅವುಗಳಿಂದಾಗಬಹುದಾದ ತೀವ್ರ ಪರಿಣಾಮಗಳಿಗೆ ಅವರು ಗಮನಕೊಡುವುದಿಲ್ಲ. ತಮ್ಮ ಕಳೆದ ಅನುಭವಗಳಿಂದ ಪಾಠಕಲಿಯಲು ಅವರು ಎಂದೂ ಪ್ರಯತ್ನಿಸುವುದಿಲ್ಲ. ತಮ್ಮ ಬಂಧುಬಾಂಧವರನ್ನು ವಂಚಿಸಲು ಮತ್ತು ಶೋಷಣೆಮಾಡಲೂ ತಮ್ಮ ಸ್ವಾರ್ಥಸಾಧನೆಗಾಗಿ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಲೂ ಅವರು ಹೇಸುವುದಿಲ್ಲ. ಮಾನವನ ಸಂಭಾವಿಕತನ ಮತ್ತು ಸಂಪ್ರದಾಯ ಪರತೆಗಳ ವಿಚಾರವಾಗಿ ಯೋಚಿಸುವ ಶಕ್ತಿ ಅವರಿಗಿದ್ದರೂ ತಮ್ಮ ವರ್ತನೆ ಸಮಾಜದ ರೀತಿ ನಿಯಮಗಳಿಗೆ ವ್ಯತಿರಿಕ್ತವಾಗಿದೆ ಎಂದು ಹಲವು ಸಲ ಅವರಿಗೆ ವೇದ್ಯವಾಗುವುದಾದರೂ ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳುವ ಇಚ್ಛೆಯಾಗಲೀ, ಪ್ರಯತ್ನವಾಗಲೀ ಅವರಲ್ಲಿರುವಂತೆ ಕಂಡು ಬಂದಿಲ್ಲ.

	ಆಂಗ್ಲ ಮನೋವೈದ್ಯನೊಬ್ಬ ವಿಕೃತ ಮಾನಸ ವ್ಯಕ್ತಿಗಳನ್ನು ನೈತಿಕದಡ್ಡರು ಎಂದು ಕರೆದಿದ್ದಾನೆ. ಈ ರೋಗದ ಲಕ್ಷಣವನ್ನು ನಿರೂಪಿಸುತ್ತಾ ಆತ ಸುಮಾರು ನೂರು ವರ್ಷಗಳಿಗಿಂತ ಹಿಂದೆಯೇ ಈ ರೀತಿ ಹೇಳಿದ್ದಾನೆ. “ಈ ರೋಗದಲ್ಲಿ ಒಂದು ರೀತಿಯ ಮಾನಸಿಕ ಅವ್ಯವಸ್ಥೆ ಇರುತ್ತದೆ. ಆದರೆ ಅಲ್ಲಿ ಬೌದ್ಧಿಕ ಸಾಮಥ್ರ್ಯಗಳಿಗೆ ಯಾವ ಹಾನಿಯೂ ಆಗಿರುವುದಿಲ್ಲ. ಅವರಲ್ಲಿ ತೀವ್ರತಮ ಭಾವನೆಗಳು ಮತ್ತು ಚಿತ್ತಪ್ರವೃತ್ತಿಗಳು ಮನೆ ಮಡಿಕೊಂಡಿರುತ್ತವೆಯಲ್ಲದೆ, ನೈತಿಕ ಮತ್ತು ಕ್ರಿಯಾತ್ಮಕ ತತ್ತ್ವಗಳು ತೀವ್ರ ವಿಕಾರಹೊಂದಿರುತ್ತವೆ ಅಥವಾ ಪತನವಾಗಿರುತ್ತವೆ. ಆತ್ಮ ಸಂಯಮ ನಾಶವಾಗಿರುತ್ತದೆ ಅಥವಾ ಅದಕ್ಕೆ ಬಹಳ ಧಕ್ಕೆಯುಂಟಾಗುತ್ತದೆ........ವಿಕೃತ ಮಾನಸ ವ್ಯಕ್ತಿ ಅನೇಕ ವೇಳೆ ಕೆಲವು ಕಾರ್ಯಗಳನ್ನು ವ್ಯವಹಾರ ಕುಶಲತೆಯಿಂದಲೂ ನಿರಾಯಾಸವಾಗಿಯೂ ನಿರ್ವಹಿಸಬಲ್ಲನಾದರೂ ತನ್ನ ದೈನಂದಿನ ವ್ಯವಹಾರಗಳಲ್ಲಿ ತನ್ನನ್ನು ತಾನೆ ಸಂಭಾವಿತನನ್ನಾಗಿ ಮಾಡಿಕೊಳ್ಳಲು ವಿಫಲನಾಗಿತ್ತಾನೆ”.

	ರೋಗಲಕ್ಷಣಗಳು: ವಿಕೃತ ಮಾನಸ ವ್ಯಕ್ತಿತ್ವ ಸಮಾಜದಲ್ಲಿರುವ ವಿವಿಧ ವ್ಯಕ್ತಿಗಳ ಮನೋವಿಕಾರಗಳ ಮಿಶ್ರ ಸಮೂಹವಾಗಿರುವುದರಿಂದ ಇಲ್ಲಿ ನಿರ್ದಿಷ್ಟ ರೋಗ ಲಕ್ಷಣಗಳನ್ನು ನಿರೂಪಿಸುವುದು ಕಷ್ಟ. ಆದರೂ ಇಲ್ಲಿಯವರೆಗೆ ಆಗಿರುವ ಸಂಶೋಧನೆಗಳಿಂದ ದೊರೆತ ತಥ್ಯಾಂಶಗಳ ಆಧಾರದ ಮೆಲೆ ಕೆಲವು ರೋಗಲಕ್ಷಣಗಳನ್ನು ಸಮಗ್ರವಾಗಿ ನಿರೂಪಿಸಬಹುದು. ಆದರೆ ಇಲ್ಲಿನ ರೋಗಲಕ್ಷಣಗಳು ಪ್ರತಿಯೊಬ್ಬ ವಿಕೃತಮಾನಸ ವ್ಯಕ್ತಿಯಲ್ಲಿಯೂ ಕಂಡುಬರದಿರಬಹುದೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. 

	ವಿಕೃತಮಾನಸ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಸಾಕಷ್ಟು ಬುದ್ಧಿಶಕ್ತಿಯಿರುತ್ತದೆ. ಅವರ ಪ್ರಮುಖ ಗುರಿ ತತ್ಕಾಲದ ಸುಖ. ಆ ಸುಖ ಪಡೆಯುವುದಕ್ಕಾಗಿ ಅವರು ಎಷ್ಟೇ ಸಮಾಜ ಬಾಹಿರ ಕರ್ತವ್ಯವನ್ನಾದರೂ ಮಡಲು ಹಿಂಜರಿಯರು. ತಮ್ಮ ಕಾರ್ಯಸಾಧನೆಗಾಗಿ ತಮ್ಮ ಕುಟುಂಬ ವರ್ಗದವರು ಮತ್ತು ಇತರ ಸಹಜೀವಿಗಳಿಗೆ ಕಿರುಕುಳವನ್ನು ಕೊಡಲೂ ಅವರು ಹೇಸರು. ತಮ್ಮ ನಿಜವಾದ ಅಂತಸ್ತಿಗಾಗಿ ಮತ್ತು ಅಹಂ, ಆದರ್ಶಗಳ ನಡುವೆ ಬಹಳ ಅಂತರವಿದ್ದಾಗ್ಯೂ ಪ್ರಪಂಚದ ಕಣ್ಣಿಗೆ ದೊಡ್ಡವರಾಗಿ ಕಾಣಿಸಿಕೊಳ್ಳುವ ಮತ್ತು ಗೌರವ, ಪ್ರತಿಷ್ಠೆಗಳನ್ನು ಗಳಿಸಬೇಕೆಂಬ ಹಂಬಲವಿರುತ್ತದೆ. ಈ ಹಂಬಲದ ತೃಪ್ತಿಗಾಗಿ ಅವರು ಆತ್ಮಘಾತುಕ ಹಾಗೂ ಸಮಾಜ ಘಾತುಕ ವಿಧಾನಗಳನ್ನು ಬಳಸುತ್ತಾರೆ.

	ತಮ್ಮ ಅಕೃತ್ಯಗಳಿಂದ ಆಗಬಹುದಾದ ಕೆಟ್ಟ ಪರಿಣಾಮಗಳ ವಿಚಾರವಾಗಿ ವಿಕೃತಮಾನಸ ವ್ಯಕ್ತಿಗಳು ಸ್ವಲ್ಪವೂ ಚಿಂತಿಸುವುದಿಲ್ಲ. ದೂರದೃಷ್ಟಿಯಾಗಲೀ ತಮ್ಮ ಹಿಂದಿನ ಅನುಭವಗಳಿಂದ ಪಾಠಕಲಿಯುವ ಮನೋಭಾವವಾಗಲೀ ಅವರಿಗೆ ಇರುವುದಿಲ್ಲ. ಅವರಿಗೆ ಬಹಳ ಅಲ್ಪಮಟ್ಟದ ನಿರ್ಣಾಯಕ ಶಕ್ತಿಯಿರುತ್ತದೆ.

	ಸಮಾಜ ಘಾತುಕ ಚಟುವಟಿಕೆಗಳಲ್ಲೇ ಅವರ ಆಸಕ್ತಿ ಹೆಚ್ಚು. ಇತರರ ಶ್ರೇಯಸ್ಸಿನತ್ತ ಅವರು ಎಂದೆಂದೂ ವಿಮುಖರು. ಅಲ್ಲದೆ ಇತರರನ್ನು ವಂಚಿಸಲು ಮತ್ತು ಶೋಷಣೆ ಮಾಡಲು ಅವರು ಸಮಯ ಕಾಯುತ್ತಿರುತ್ತಾರೆ. ಇತರರು ತೋರಿಸುವ ದಯಾಭಾವಕ್ಕೆ ಅವರಿಂದ ದೊರಕುವುದು ಕೃತಘ್ನತೆ. ಅವರು ಆತ್ಮೀಯ ಮಿತ್ರರನ್ನೇ ಕಾಣರು. ಇತರರು ತೋರಿಸುವ ಪ್ರೀತಿಯನ್ನು ಅರ್ಥಮಾಡಿಕೊಳ್ಳಲಾರರು. ಪಶ್ಚಾತ್ತಾಪಕ್ಕೂ ಅವರಿಗೂ ಬಹಳ ಅಂತರ. ವಿಕೃತ ಮಾನಸ ವ್ಯಕ್ತಿಗಳು ಯಾವಾಗಲೂ ಅಸ್ಥಿರ ಮನಸ್ಕರು. ಅವರ ಜೀವಿತಕ್ಕೆ ದೃಢವಾದ ಧ್ಯೇಯವಿರುವುದಿಲ್ಲ. ಅಸ್ಪಷ್ಟವಾಗಿರುವ ಮಹತ್ತ್ವಾಕಾಂಕ್ಷೆಗಳು ಅವರಲ್ಲಿ ಪದೇ ಪದೇ ಬದಲಾಗುತ್ತಿರುತ್ತವೆ. ಅವರು ಆಗಾಗ ತಮ್ಮ ಉದ್ಯೋಗಗಳನ್ನು ಬದಲಾಯಿಸುತ್ತಿರುತ್ತಾರೆ ಮತ್ತು ಅಲೆಮಾರಿಗ ಳಂತಿರುತ್ತಾರೆ. ಅವರ ಭಾವನೆಗಳು ನಿರಾಳವಾಗಿದ್ದು ಕ್ರೂರತನ ಮತ್ತು ಕ್ಷಣಿಕತೆಗಳಿಂದ ಕೂಡಿರುತ್ತವೆ. ತಮ್ಮ ಭಾವೋದ್ರೇಕಗಳ ಮೇಲೆ ಅವರಿಗೆ ಹತೋಟಿ ಇರುವುದಿಲ್ಲ. ಹಲವುಸಲ ನಿಕೃಷ್ಟ ವಿಷಯಗಳಿಗೂ ಬಹಳ ಬೇಗ ಉತ್ಸಾಹದಿಂದ ಹಿಗ್ಗಿದರೆ, ಮರುಕ್ಷಣದಲ್ಲಿಯೇ ನಿರಾಶೆಯಿಂದ ತಗ್ಗುತ್ತಾರೆ. ಅವರ ಮನಸ್ಸು ಭಾವೋದ್ರೇಕಗಳ ತೂಗುಯ್ಯಾಲೆಗಳಂತಿರುತ್ತವೆಂದು ಹೇಳಬಹುದು. ಅವರಲ್ಲಿ ಲೈಂಗಿಕ ಬೆಳೆವಣಿಗೆ ಸಾಮಾನ್ಯವಾಗಿ ಕುಂಠಿತವಾಗಿರುತ್ತದೆ ಅಥವಾ ಅಪಮಾನ್ಯವಾಗಿರುತ್ತದೆ. ಅವರ ಲೈಂಗಿಕ ಜೀವನ ವಿಪರೀತ ವಿಚಿತ್ರ ವಿಕಾರಗಳಿಂದ ತುಂಬಿರುತ್ತದೆ. ತಮ್ಮ ಹೇಯ ಕೃತ್ಯಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವುರಲ್ಲಿ ಅವರಿಗೆ ಸಂಕೋಚವಾಗಲೀ ನಾಚಿಕೆಯಾಗಲೀ ಇರುವುದಿಲ್ಲ. ಅವರ ವೈವಾಹಿಕ ಜೀವನ ತಾತ್ಕಾಲಿಕವಾಗಿದ್ದು ಹಲವರು ಪದೇ ಪದೇ ವಿವಾಹ ಮಾಡಿಕೊಳ್ಳುತ್ತಾರೆ.

	ವಿಕೃತ ಮಾನಸ ವ್ಯಕ್ತಿಗಳಿಗೆ ಇತರರನ್ನು ಬೆರಗುಗೊಳಿಸುವ ಮತ್ತು ಆಕರ್ಷಿಸುವ ಶಕ್ತಿಯಿರುತ್ತದೆ. ಮೊದಲ ಭೇಟಿಗೆ ಇತರರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಳ್ಳಬಲ್ಲರು. ಕೆಲವರಿಗೆ ಉತ್ತಮ ಹಾಸ್ಯ ಪ್ರವೃತ್ತಿಯೂ ಇರುತ್ತದೆ. ತಮ್ಮ ಶಾಪಕ್ಕೆ ಬಲಿಯಾದವರ ಮೇಲೆ ಅವರು ಅನುಕೂಲಕರ ಪ್ರಭಾವ ಬೀರಬಲ್ಲರು. 

	ವಿಕೃತ ಮಾನಸ ವ್ಯಕ್ತಿಗಳಿಗೆ ನೈತಿಕ ಪ್ರಜ್ಞೆಯಾಗಲೀ ಸಾಮಾಜಿಕ ಪ್ರಜ್ಞೆಯಾಗಲೀ ಸರಿಯಾಗಿ ರೂಪುಗೊಂಡಿರುವುದಿಲ್ಲ. ಮಾತಿನಲ್ಲಿ ಮಾತ್ರ ಉಚ್ಚಮಟ್ಟದ ನೈತಿಕ ಜೀವನ ನಡೆಸುತ್ತಿರುವಂತೆ ತೋರಿಸಿಕೊಂಡರೂ ಅದನ್ನು ಅರ್ಥಮಾಡಿಕೊಳ್ಳುವುದಾಗಲೀ ಅದನ್ನು ಒಪ್ಪಿಕೊಳ್ಳುವುದಾಗಲೀ ಅವರಿಂದ ಸಾಧ್ಯವಿಲ್ಲ. ಅವರು ಸ್ವಾರ್ಥಿಗಳು, ಉದ್ವೇಗಪರರು ಮತ್ತು ಬೇಜವಾಬ್ದಾರಿಯುತರು. ಇತರರ ಹಕ್ಕು ಬಾಧ್ಯತೆಗಳ ವಿಚಾರದಲ್ಲಿ ಅತ್ಯಂತ ಅಲಕ್ಷ್ಯದಿಂದಿರುತ್ತಾರಯಲ್ಲದೆ ಮಹಾಸುಳ್ಳುಗಾರರಾಗಿರುತ್ತಾರೆ. ಆತಂಕ ಮತ್ತು ಅಪರಾಧಭಾವಗಳು ಲವಲೇಶವೂ ಅವರಲ್ಲಿರುವುದಿಲ್ಲ. ಅದಕ್ಕೆ ಬದಲಾಗಿ ವಿರೋಧಭಾವ ಮತ್ತು ಆಕ್ರಮಣಕಾರೀ ಪ್ರವೃತ್ತಿಗಳು ಅವರಲ್ಲಿ ಮನೆಮಾಡಿಕೊಂಡಿರುತ್ತವೆ. ಅವರು ಕೆಲವು ಸಲ ತಮ್ಮ ತಪ್ಪುಗಳನ್ನು ಸಮಾಜದ ಮೇಲೆ ಪ್ರಕ್ಷೇಪ ಮಾಡುವುದುಂಟು. ತಮ್ಮ ಅಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ನಿರಾಯಾಸವಾಗಿ ಸುಳ್ಳು ಹೇಳಬಲ್ಲರು. ಕೆಲವೊಂದು ವೇಳೆ ದುರ್ವರ್ತನೆಗಳನ್ನು ಸರಿಪಡಿಸಿಕೊಳ್ಳತ್ತೇವೆ ಎಂದು ಹೇಳಿದರೂ ಅದಕ್ಕಾಗಿ ಎಂದೂ ಪ್ರಯತ್ನಿಸರು.

	ಚಿಕಿತ್ಸೆ ಮತ್ತು ಮುನ್ಸೂಚನೆ: ವಿಕೃತ ಮಾನಸ ವ್ಯಕ್ತಿತ್ವ ವೈವಿಧ್ಯಪೂರ್ಣ ರೋಗವಾಗಿರುವುದರಿಂದ ಅದರ ಸಮಗ್ರ ಚಿತ್ರ ಇನ್ನೂ ಸ್ಪಷ್ಟವಾಗಿ ರೂಪುಗೊಂಡಿಲ್ಲ ಎಂಬ ಕಾರಣದಿಂದರಿಂದಲೂ ಮತ್ತು ದೀರ್ಘಕಾಲಿಕ ಚಿಕಿತ್ಸಾ ಸೌಲಭ್ಯಗಳ ಅಭಾವದಿಂದಾಗಿಯೂ ಈ ರೋಗದ ಚಿಕಿತ್ಸೆಯಲ್ಲಿ ಅಷ್ಟು ಪ್ರಗತಿಯಾಗಿಲ್ಲವೆಂದು ಹೇಳಬಹುದು. ಇದಲ್ಲದೆ ಮನೋವೈದ್ಯ ಶಾಲೆಗಳನ್ನು ಸೇರುವವರ ಸಂಖ್ಯೆ ಅತ್ಯಂತ ಕಡಿಮೆ-ಸೇ. ಒಂದು. ಅಲ್ಲದೆ ಜಟಿಲ ಜೈವಿಕ ಕಾರಣಗಳಿದ್ದರೆ ಅವುಗಳನ್ನು ಸರಿಪಡಿಸುವುದಂತೂ ಕಷ್ಟಸಾಧ್ಯ. ಮೇಲಾಗಿ ಈ ರೋಗಕ್ಕೆ ಇರಬಹುದಾದ ದೀರ್ಘ ಹಿನ್ನೆಲೆ ಮತ್ತು ತಮ್ಮ ರೋಗವನ್ನು ಗುಣಪಡಿಸಿಕೊಳ್ಳುವುದರಲ್ಲಿ ರೋಗಿಗಳಿಗೆ ಇರುವ ಅಲ್ಪ ಇಚ್ಛೆ, ಇವುಗಳಿಂದಾಗಿ ಈ ರೋಗದ ಚಿಕಿತ್ಸಾಕಾರ್ಯ ಹೆಚ್ಚು ಜಟಿಲವಾಗುತ್ತದೆ.

	ಈ ಮೇಲಿನ ಕಾರಣಗಳಿಗಾಗಿಯೇ ವಿಕೃತಮಾನಸ ವ್ಯಕ್ತಿಗಳನ್ನು ಗುಣಪಡಿಸುವ ಕಾರ್ಯ ಅತ್ಯಂತ ಕ್ಲಿಷ್ಟವಾದದ್ದು.. ಈ ದಿಶೆಯಲ್ಲಿ ಬ್ಯಾನಿ, ಲಿಂಡನರ್, ಥಾರ್ನೆ ಮೊದಲಾದವರು ಶ್ಲಾಘನೀಯ ಸಂಶೋಧನೆ ಗಳನ್ನು ಮಾಡಿದ್ದಾರೆ. ಯಾವುದಾದರೂ ಚಿಕಿತ್ಸಾಕಾರ್ಯ ಜಯಪ್ರದವಾಗ ಬೇಕಾದರೆ, ಅದು ರೋಗಿಯ ವ್ಯಕ್ತಿತ್ವ, ಬೆಳೆವಣಿಗೆಯ ಹಿನ್ನೆಲೆಗಳಿಗೆ ಹೆಚ್ಚು ಮಹತ್ತ್ವವನ್ನು ಕೊಡುವುದರ ಜೊತೆಗೆ, ವಾಸ್ತವಿಕತೆ ಮತ್ತು ವೈಯಕ್ತಿಕ ಜವಾಬ್ದಾರಿಗಳ ಕಡೆಗೂ ಆದ್ಯಗಮನ ಕೊಡಬೇಕೆಂಬುದು ಮೇಲಿನ ಸಂಶೋಧಕರ ಅನುಭವಗಳಿಂದ ವೇದ್ಯವಾಗಿದೆ. ರೋಗಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡಲು ದೀರ್ಘಕಾಲಿಕ ಚಿಕಿತ್ಸಾ ಕಾರ್ಯಕ್ರಮವನ್ನು ರೂಪಿಸುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ.	
		
	(ಎ.ಎಸ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ